












ಪರ್ಲತ್ತಾಯ ವಂಶಸ್ಥರ ಕುಲದೇವರು
ಶ್ರೀ ಅನಂತಪದ್ಮನಾಭ ಸ್ವಾಮಿ
ಸ್ಥಳ : ಕೊಂಡಪ್ಪಾಡಿ
ಗ್ರಾಮ : ರಾಮಕುಂಜ
ತಾಲೂಕು : ಕಡಬ
ಜಿಲ್ಲೆ : ದಕ್ಷಿಣ ಕನ್ನಡ
ಚರಿತ್ರೆ : ತಿರುವನಂತಪುರದ ಶ್ರೀ ಅನಂತಶಯನ ದೇವಳದಲ್ಲಿ, ದೇವರ ಪೂಜಾಸೇವೆಗಳಿಗೆ , ಕೊಕ್ಕಡದ ದಿವಾಕರ ಮುನಿಗಳಿಂದ ನಿಯುಕ್ತಿಗೊಂಡ, 10 ಶಿವಳ್ಳಿಕುಲಗಳಲ್ಲಿ, ಪರ್ಲತ್ತಾಯ ಕುಲವೂ ಒಂದು.
ಸುಮಾರು, 300-400 ವರ್ಷಗಳ ಹಿಂದೆ, ಅನಂತಶಯನದಲ್ಲಿ , ಅನೇಕವರ್ಷ ಸೇವೆ ಸಲ್ಲಿಸುತ್ತಿದ್ದ ಪರ್ಲತ್ತಾಯ ಅರ್ಚಕರಿಗೆ(ಪೆರಿಯ ನಂಬಿ) , ತನ್ನೂರಿನ ಮತ್ತು ತನ್ನ ಮಡದಿಯ ನೆನಪು ತೀವ್ರವಾಗಿ, ತನ್ನೂರಿಗೆ ತೆರಳುವ ಉತ್ಕಟೇಚ್ಚೆಯಾಗಿ, ರಾಜನಲ್ಲಿ ಅನುಮತಿ ಕೇಳಿದಾಗ, ಸತತವಾಗಿ ನಿರಾಕರಿಸಲ್ಪಟ್ಟಾಗ, ಪೂಜಿಸುವ ದೇವರನ್ನೇ ಮೊರಹೊಕ್ಕಾಗ, ಶ್ರೀ ಅನಂತಪದ್ಮನಾಭನ ಪ್ರೇರಣೆಯೊಂದಿಗೆ, ಶ್ರೀ ಸಾನಿಧ್ಯದೊಂದಿಗೆ , ರಾಮಕುಂಜ ಗ್ರಾಮದ ಸಂಪ್ಯಾಡಿ ಎಂಬ ಸ್ಥಳದ ಬಳಿ ಬಂದು ನೆಲೆಯಾದ , ಶ್ರೀ ಅನಂತಪದ್ಮನಾಭ ಸ್ವಾಮಿ.
ಅನಂತಶಯನದಿಂದ, ದೇವರ ಪ್ರೇರಣೆಯಂತೆ, ದೇವಸಾನಿಧ್ಯದೊಂದಿಗೆ, ಮುಂಜಾನೆಯ ಹೊತ್ತು, ಸಂಪ್ಯಾಡಿಯ ಬಳಿ ತಲುಪಿದ ಈ ಪೂರ್ವಜರಿಗೆ, ಪ್ರಾತಃ ವಿಧಿಗಳನ್ನು ನೆರವೇರಿಸಲು, ದೇವಸಾನಿಧ್ಯಗಳನ್ನು ಕೆಳಗಿಟ್ಟು, ಪೂಜಾವಿಧಿಗಳನ್ನು ಮುಗಿಸಿ, ಮತ್ತೆ , ದೇವಸಾನಿಧ್ಯಗಳನ್ನು ಎತ್ತಲು ಸಾಧ್ಯವಾಗದೇ, ಅಲ್ಲೇ ಸ್ಥಿರನಾದ, ವಲ್ಮೀಕಶಯನನಾದ ಶ್ರೀ ಅನಂತಪದ್ಮನಾಭ ಸ್ವಾಮಿ.
ಗ್ರಾಮೀಣ ಜನರಿಂದ , “ಕೊಂಡತ್ತು ಪಾಡ್ದುನೊ ದೇವೆರ್” ಎಂಬ ನುಡಿಯು, ಕಾಲಾಂತರದಲ್ಲಿ, “ಕೊಂಡಪ್ಪಾಡಿ” ಎಂದೇ ಪ್ರಖ್ಯಾತವಾಯಿತು.
“ಕೊಂಡಪ್ಪಾಡಿ ಶ್ರೀ ಅನಂತಪದ್ಮನಾಭ ದೇವರು”
ಎಲ್ಲರಿಗೂ ಮಂಗಳವನ್ನುಂಟುಮಾಡಲಿ




ಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ (18-05-2005 – 19-05-2005)
ಸಿಂಚನ ಸ್ಮರಣ ಸಂಚಿಕೆಯಿಂದ ಆಯ್ದ ಭಾಗ
ಪುನರ್ನಿರ್ಮಾಣದ ಯಶೋಗಾಥೆ
ಬೀಳುವುದ ನಿಲ್ಲಿವುದು, ಬಿದ್ದುದನು ಕಟ್ಟುವುದು
ಹಾಲೂಡೆಯ ಕಡೆದವನು ತಕ್ರವಾಗಿಪುದು
ಹಾಳಾಹಾಳಾಗಿಪುದು ಹಳದ ಹೊಸದಾಗಿಪುದು
ಬಾಳಿಗಿದು ಚಿರಧರ್ಮ- ಮಂಕುತಿಮ್ಮ
ಯಾವುದಾದರೂ ಬೀಳುತ್ತಿದ್ದರೆ ಅದನ್ನೆತ್ತಿ ನಿಲ್ಲಿಸುವುದು. ಅದು ಬಿದ್ದೇ ಹೋಗಿದ್ದರೆ ಅದನ್ನು ಪುನಃ ಕಟ್ಟುವುದು. ಹಾಲೊಡೆದಿದ್ದರೆ ಅದನ್ನು ಕಡೆಗೋಲಿನಿಂದ ಕಡೆದು ಮಜ್ಜಿಗೆಯನ್ನಾಗಿಸುವುದು. ಹಾಳಾಗಿ ಹೋಗಿದ್ದನ್ನು ಹಾಳಾಗಲು ಬಿಡುವುದು. ಕಳಹಳೆಯದಾಗಿರುವುದನ್ನು ಹೊಸದಾಗಿಸುವುದು. ಬಾಳಿಗೆ ಇದೇ ಸದಾಕಾಲ ಇರತಕ್ಕ ಕರ್ತವ್ಯ ಎಂದಿದ್ದಾರೆ ಕವಿ ಡಿ.ವಿ.ಜಿಯವರು. ಹಾಗೆಯೇ ಮುಂದುವರಿದು.
ದೇವಮಂದಿರ ಭಜನೆ ಪೂಜೆ ಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ ಭಾವವಂ ಕ್ಷುಲಕ ಜಗದಿಂ ಬಿಡಿಸಿ ಮೇಲೊಯ್ವ
ದೇಶಾಂತರದಾವುದಾದೊಡದೊಳಿತು – ಮಂಕುತಿಮ್ಮ
ದೇವಸ್ಥಾನಗಳಿಗೆ ಹೋಗುವುದು, ದೇವರ ಭಜನೆಯನ್ನು ಮಾಡುವುದು, ಪೂಜೆ ಮಾಡಿ ಪ್ರಸಾದವನ್ನು ಸ್ವೀಕರಿಸುವುದು, ಇವುಗಳೆಲ್ಲಾ ಜೀವನಕ್ಕೆ ಅಲಂಕಾರ ತಂದುಕೊಡುತ್ತವೆ. ಮನಸ್ಸಿನ ಉದ್ಧಾರಕ್ಕೆ ಕಾರಣವಾಗುತ್ತವೆ. ನಮ್ಮ ಭಾವನೆಗಳನ್ನು ಈ ಅಲ್ಪ ಜಗತ್ತಿನಿಂದ ಬಿಡಿಸಿ ಮೇಲಕ್ಕೆ ಕೊಂಡು ಹೋಗುವುದಾದರೆ ಇವೆಲ್ಲವೂ ಒಳ್ಳೆಯದು – ಎನ್ನುತ್ತಾರೆ.
ದೇವಸ್ಥಾನವು ಒಂದು ಗ್ರಾಮದ, ಒಂದು ಜನಾಂಗದ ಸಾಂಸ್ಕೃತಿಕ ಅಭ್ಯುದಯದ ಸಂಕೇತ ಎನ್ನಬಹುದು. ದೇವಸ್ಥಾನಗಳ ನಿರ್ಮಾಣ ಶ್ರೇಷ್ಟ ಕೆಲಸ. ಅಂತೆಯೇ ಹಿಂದಿನ ಮುನಿ ಶ್ರೇಷ್ಟರಿಂದ, ರಾಜ ಮಹಾರಾಜರಿಂದ, ಅನೇಕ ಮಹನೀಯರಿಂದ ಇಂತಹ ದೇವಾಲಯಗಳ ನಿರ್ಮಾಣವಾಗಿದೆ. ನಿರ್ಮಾಣಗೊಂಡ ಇಂತಹ ದೇವಾಲಯಗಳು ಕಾಲಕಳೆದಂತೆ ಜೀರ್ಣಗೊಂಡಾಗೆಲ್ಲಾ ಆದರ ಜೀರ್ಣೋದ್ಧಾರ ಅಥವಾ ಪುನರ್ ನಿರ್ಮಾಣ ಆಗಬೇಕಾಗುತ್ತದೆ. ಹಳೆಯ ದೇವಸ್ಥಾನದ ಜೀರ್ಣೋದ್ಧಾರವು ಹೊಸ ನಿರ್ಮಾಣಕ್ಕಿಂತಲೂ ಪುಣ್ಯಕರವಾಗಿದೆ ಅನ್ನುತ್ತಾರೆ. ಈ ಕಾರ್ಯವನ್ನು ಸಂಬಂಧ ಪಟ್ಟ ಭಕ್ತಾಧಿಗಳು ಕರ್ತವ್ಯವೆಂದು ತಿಳಿದು ಭಕ್ತಿಯಿಂದ ಮಾಡುತ್ತಾರೆ,
ಜೀರ್ಣೋದ್ಧಾರ ಎಂಬ ಈ ಪ್ರಕ್ರಿಯೆ ತಾತ್ಕಾಲಿಕವಾದ ಮನರಂಜನೆಯ ಕೆಲಸವಲ್ಲ, ಹಿಂದಿನ ಹಿರಿಯರು ಸದುದ್ದೇಶದಿಂದ ಮಾಡಿದ ಕಾಯಕಕ್ಕೆ ಮನ್ನಣೆ ನೀಡಿ ಮುಂದಿನ ಪೀಳಿಗೆಯ ಮಂದಿಯ ಶ್ರೇಯಸ್ಸಿಗಾಗಿ ಇಂದಿನ ಹಿರಿಯರ ಕಿರಿಯರ ದುಡಿಮೆ ಹಾಗೂ ಕೊಡುಗೆಯಾಗಬೇಕು, ಸಮಗ್ರವಾದ ಜೀರ್ಣೋದ್ಧಾರ ಅಥವಾ ಪುನರ್ ನಿರ್ಮಾಣದ ಕೆಲಸಗಳೆಲ್ಲವೂ ಶ್ರೀ ದೇವರ ಪ್ರೇರಣೆ ಹಾಗೂ ಆಶೀರ್ವಾದದಿಂದ ಮಾತ್ರ ಸಾಧ್ಯ.
ಹಾಗೆಯೇ ಪರ್ಲತ್ತಾಯ ವಂಶಸ್ಥರ ಕುಲದೇವರಾದ ಶ್ರೀ ಕೂಂದಪ್ಪಾಡಿ ಅನಂತಪದ್ಮನಾಭ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಆತನ ಸಂಪೂರ್ಣ ಅನುಗ್ರಹದಿಂದಾಗಿ ನೆರವೇರಿದೆ ಎಂಬುದರಲ್ಲಿ ಎರಡು ಮಾತಿಲ್ಲ, ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಕನಸು ಕಳೆದ ಸುಮಾರು ಎರಡು ತಲೆಮಾರುಗಳಿಂದ ಮೂಡಿತ್ತು. ಆ ಕನಸು ಮಾರ್ತರೂಪಗೊಂಡು ಚಿಗುರೊಡೆದು ಬೆಳೆಯಲು ಪ್ರಾರಂಭವಾದುದು ಕಳೆದೆರಡು ದಶಮಾನಗಳಲ್ಲಿ, ಅಂತೆಯೇ 1996ರಲ್ಲಿ ಅಷ್ಟಮಂಗಲ ಪ್ರಶ್ನೆಯ ಮೂಲಕ ಚಿಂತನೆ ನಡೆದು ಮೊದಲ ಹೆಜ್ಜೆಯನ್ನು ಇಡಲಾಯಿತು. ಆ ಸಮಯದಲ್ಲಿ ಪರ್ಲತ್ತಾಯ ಕುಲಸಂಜಾತರನ್ನೆಲ್ಲಾ ಒಂದೆಡೆ ಸೇರಿಸಿ ಜೀರ್ಣೋದ್ಧಾರದ ಗುರಿಯನ್ನು ಬಲಪಡಿಸುವ ಪ್ರಕ್ರಿಯೆ ಆರಂಭವಾಯಿತು. ಇದರ ಪ್ರತಿಫಲವಾಗಿ 1996ರಲ್ಲಿ ಪರ್ಲತ್ತಾಯ ಪ್ರತಿಷ್ಠಾನದ ಉದಯವಾಯಿತು. ಈ ಪುಣ್ಯ ಕೆಲಸವನ್ನು ಮಾಡುವುದಕ್ಕಾಗಿ ಭಗವಂತನಿಂದ ಪ್ರೇರೇಪಿಸಲ್ಪಟ್ಟವ ರೆಲ್ಲಾ ಜತೆಗೂಡಿ ಕೈಗೂಡಿಸಿದರು. ಸುಮಾರು 1996ರಿಂದ 2001ರವರೆಗೆ ಸುಮಾರು ಚಿಂತನೆಗಳು, ಚರ್ಚೆಗಳು, ಕಾರ್ಯತಂತ್ರ ಗಳು – ಮಜ್ಜಿಗೆಯನ್ನು ಕಡೆಗೋಲಿನಿಂದ ಕಡೆಯುವ ತೆರೆದಲ್ಲಿ ನಡೆದು ಅಂತಿಮವಾಗಿ ಉತ್ತಮವಾದ ಬೆಣ್ಣೆ ಮೇಲೆ ಬರುವಂತೆ 26-10-2001ರಂದು ಅನುಜ್ಞಾ ಕಲಶವು ನೆರವೇರಿ ಪುನರ್‌ನಿರ್ಮಾಣದ ಮೊದಲ ಹಂತ ಮೂಡಿ ಬಂತು, ಅನಂತರ ನಡೆ ದುದ್ದೆಲ್ಲಾ ದೈವಲೀಲೆ.
“ಧೈರ್ಯವಾಗಿ ಮುಂದೆ ಕಾಲಿಡಿ. ನೀವು ಮಾಡುವುದು ದೇವರ ಕೆಲಸ, ಸ್ವಚ್ಛ ಮನಸ್ಸಿನಿಂದ ಅರ್ಪಣಾಭಾವದಿಂದ ನೀವು ಕಾರ್ಯಗತವಾದರೆ ಆತ ನಿಮ್ಮಿಂದ ಈ ಕೆಲಸವನ್ನು ಮಾಡಿಸಿಕೊಂಡು ಹೋಗುತ್ತಾನೆ”. ಈ ಅಭಯದ ಹಿನ್ನೆಲೆಯಲ್ಲಿ ಎಲ್ಲರೂ ಕೆಲಸ ಕಾರ್ಯಗಳನ್ನು ಅತ್ಯಂತ ಅರ್ಪಣಾ ಭಾವದಿಂದ ಕೈಗೆತ್ತಿಕೊಂಡರು. ಬ್ರಹ್ಮಕಲಶದ ದಿನವನ್ನು ನಿಗದಿ ಮಾಡಿ ಮುಂದಿನ 105 ದಿನಗಳಲ್ಲಿ ಪವಾಡ ಸದೃಶವಾಗಿ ಕೆಲಸ ಕಾರ್ಯಗಳು ಸಾಗತೊಡಗಿದವು. ಬ್ರಹ್ಮಕಲಶದ ದಿನ ಹತ್ತಿರವಾಗುವಂತೆ ದೇವರ ಮುಖ್ಯ ಗುಡಿಯ ನಿರ್ಮಾಣ ಸಂಪೂರ್ಣ ಆಯಿತಾದರೂ ಸುತ್ತಲಿನ ಪೌಳಿಯ ಕೆಲಸ, ಗೋಪುರದ ಕೆಲಸ ಆಗಿರಲಿಲ್ಲ. ಆದರೆ ಅನಂತಪದ್ಮನಾಭ ಸ್ವಾಮಿಯ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಕ್ಕೆ ಎಲ್ಲಾ ತಯಾರಿಗಳೂ ಪೂರ್ಣಗೊಂಡವು ಮೂರು ದಿನಗಳ ಕಾರ್ಯಕ್ರಮಗಳೂ ಅತ್ಯಂತ ವೈಭವ ಪೂರ್ಣವಾಗಿ ಯಾವೊಂದು ಅಡ್ಡಿ ಆತಂಕಗಳೂ ಇಲ್ಲದೆ ನಡೆದುವು.
ಆ ಸಂದರ್ಭದಲ್ಲಿ ಪುನರ್ ನಿರ್ಮಿತ ದೇವಳದಲ್ಲಿ ದುರ್ಗಾದೇವಿಯ ಪ್ರತಿಷ್ಠೆಯು ಆಗಬೇಕು ಎಂಬ ಸಂದೇಶ ನಮಗೆ ಬಂತು. ಅದರಂತೆ ನಾವೆಲ್ಲರೂ ಈ ಕಾರ್ಯಕ್ಕೆ ಕಂಕಣ ಬದ್ದರಾದೆವು ಸುತ್ತುಪೌಳಿ ಹಾಗೂ ಗೋಪುರದ ಕೆಲಸ ಯಾಕೆ ಪೂರ್ಣ ವಾಗಲಿಲ್ಲ… ಎಂಬುವುದರ ಹಿನ್ನೆಲೆ ಆಗ ನಮಗೆ ತಿಳಿಯಿತು, ಹಾಗೆಯೇ ಅನಂತರದ ದಿನಗಳಲ್ಲಿ ಪುನಃ ವಿಮರ್ಶೆ ಚಿಂತನೆಗ ಳಾಗಿ ಶ್ರೀ ದೇವಿಯ ಪ್ರತಿಷ್ಠೆಯನ್ನು ಗೋಪುರದಲ್ಲಿ ಮಾಡುವುದುದಾಗಿ ತೀರ್ಮಾನಿಸಲಾಯಿತು.
ಸುತ್ತು ಪೌಳಿ ಹಾಗೂ ಗೋಪುರದ ರಚನೆ ಪ್ರಕ್ರಿಯೆ ಕೊಂಚ ನಿಧಾನವಾಗಿಯೇ ಸಾಗಿತ್ತಾದರೂ 2004-05ರಲ್ಲಿ ಮತ್ತ ಚಾಲನೆ ಸಿಕ್ಕಿ 2006ನೇ ಮೇ 18 ಮತ್ತು 19ಕ್ಕೆ ಶ್ರೀ ದುರ್ಗಾದೇವಿಯ ಪ್ರತಿಷ್ಠೆಯ ಮೂಲಕ ಗೋಪುರವು ದೇವರ ಸೇವೆಗೆ ಸಜ್ಜಾಗಿದೆ. ಸುತ್ತಲಿನ ಗೋಪುರದ ರಚನೆ ಅತ್ಯಂತ ಸುಂದರವಾಗಿ ಮೂಡಿ ಬಂದಿದ್ದು ಒಳಗಿನ ಅಂಗಣದ ಕಲ್ಲು ಹಾಸುವಿಕೆಯು ನಡೃದಿದೆ.
ಪೂರ್ಣಗೊಂಡ ಈ ದೇವಳವನ್ನು ಕಂಡು ಮನಸ್ಸಿಗೆ ಅತ್ಯಂತ ಸಂತೋಷ ಹಾಗೂ ತೃಪ್ತಿಯಾಗಿದೆ. ಈ ಜೀರ್ಣೋದ್ದಾರದ ಪುಣ್ಯ ಕೆಲಸದಲ್ಲಿ ಪಾಲ್ಗೊಂಡವರೆಲ್ಲಾ ಧನ್ಯರು, ಇಂತಹ ಸುಯೋಗ ಪ್ರಾಪ್ತವಾಗಿರುವುದು ನಮ್ಮ ಸುಕೃತ.
ಧಾರ್ಮಿಕ ಆಚರಣೆಗಳಿಗೆ, ಮಹಾತ್ಕಾರ್ಯಗಳಿಗೆ ಅಂತ್ಯವೆಂಬುದಿಲ್ಲ. ಹಾಗೆಯೇ ನಮ್ಮ ಈ ಕ್ಷೇತ್ರದಲ್ಲಿಯೂ ಆಗುವ ಕೆಲಸಗಳು ಇನ್ನೂ ಅನೇಕವಿದೆ, ಅವುಗಳಲ್ಲಿ, ಸಭಾ ಮಂದಿರ, ಅರ್ಚಕರಿಗೆ ಮನೆ, ದೇವಸ್ಥಾನದ ಹೊರಾಂಗಣದ ಅಭಿವೃದ್ಧಿ ಕೆರೆಗೊಂದು ಗೋಪುರ ಇತ್ಯಾದಿಗಳ ನಿರ್ಮಾಣದ ಯೋಜನೆಯಿದೆ. ಭಕ್ತಾದಿಗಳೆಲ್ಲರ ಸಕಾಲಿಕ ಸಹಕಾರದಿಂದ ಈವರೆಗಿನ ಕೆಲಸ ಕಾರ್ಯಗಳು ಯಶಸ್ವಿ ಯಾಗಿ ಪೂರ್ಣಗೊಂಡಿದೆ. ಹಾಗೆಯೇ ಆ ಭಗವಂತನ ಕೃಪೆಯಿಂದ ಹಾಗೂ ಭಕ್ತಾಭಿಮಾನಿಗಳ ಸಂಪೂರ್ಣ ಸಹಕಾರದಿಂದ ಮುಂದಿನ ಯೋಜನೆಗಳೇಲ್ಲಾ ಸಾಕಾರಗೊಳ್ಳುತ್ತವೆಯೆಂಬ ಭರವಸೆ ನಮಗೆಲ್ಲ.
ಲೇಖಕರು
ನಗ್ರಿ ವೆಂಕಟರಾಜ
ನಿವೃತ್ತ ಉಪ ಮಹಾಪ್ರಬಂಧಕರು, ಕರ್ಣಾಟಕ ಬ್ಯಾಂಕ್, ಮಂಗಳೂರು
ಹಾಗು ಈಗಿನ ಅಧ್ಯಕ್ಷರು -ಪರ್ಲತ್ತಾಯ ಪ್ರತಿಷ್ಠಾನ.




ಶ್ರೀ ದುರ್ಗಾಪರಮೇಶ್ವರಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ (18-05-2005 – 19-05-2005)
ಸಿಂಚನ ಸ್ಮರಣ ಸಂಚಿಕೆಯಿಂದ ಆಯ್ದ ಭಾಗ
ಜೀರ್ಣೋದ್ಧಾರದ ನೆನಪುಗಳು
ನಮ್ಮ ಬಾಲ್ಯದ ದಿನಗಳಲ್ಲಿ ಕೊಂದಪ್ಪಾಡಿ ದೇವಸ್ಥಾನಕ್ಕೆ ಹೋಗುವುದೆಂದರೆ ತುಂಬಾ ಇಷ್ಟ. ಆದರೆ ಅಲ್ಲಿನ ಸುತ್ತಲ ಸ್ಥಿತಿ ಕಂಡಾಗ ಭಯ. ದೊಡ್ಡಗುಡ್ಡದ ಮೇಲಿಂದ ಇಳಿಜಾರಿನ ದಾರಿ ಸುತ್ತ ಮುತ್ತ ಕಾಡು ಗಿಡ-ಗಂಟಿಗಳು, ಜನವರಿ ಫೆಬ್ರವರಿ ವೇಳೆಗೂ ಅಂಗಣದಲ್ಲಿ ನೀರು, ದೇವಳಕ್ಕೆ ಸುತ್ತು ಬಂದು ಜಗಲಿಯಲ್ಲಿ ನಿಲ್ಲಲೂ ಭಯ. ಯಾಕೆಂದರೆ ಗೋಡೆಯಲ್ಲಿ ಸಂದುಗಳು, ಬಿಲಗಳು, ಅದರಲ್ಲಿ ಸರ್ಪಗಳು ಎಲ್ಲಿಂದ ಬರುತ್ತವೋ ಎಂಬುದೇ ನಮ್ಮ ಚಿಂತೆ. ದೇವಳದ ಒಳಗಂತೂ ಬೆಳಕೇ ತುಂಬಾ ಕಡಿಮೆ. ಅಲ್ಲಿ ಅದಕ್ಕಿಂತ ಭಯ. ಆ ವೇಳೆಗೆ ಒಂದೇ ಧೈರ್ಯ ಅರ್ಚಕರ ಮಂತ್ರದ ಧ್ವನಿ, ಬಹಳ ದೂರಕ್ಕೆ ಮಂತ್ರ ಕೇಳುತ್ತಿದ್ದುದು ಬರುವ ಭಕ್ತರಿಗೆ ಒಂದು ರೀತಿಯ ಧೈರ್ಯ ತುಂಬುತ್ತಿತ್ತು. ಅಪರಾಹ್ನವಂತೂ ಅಲ್ಲಿಗೆ ಹೋಗುವ ಜನರೇ ಕಡಿಮೆ.
ಇಂತಹ ಸ್ಥಿತಿಗತಿ ಇದ್ದರೂ ಆಟಿ ಅಮಾವಾಸ್ಯೆ ಎಂಬುದು ದೊಡ್ಡ ಹಬ್ಬ, ಆಡಳಿತದಾರರ ಮನೆ ಸಂಪ್ಯಾಡಿ ಪಕ್ಕದಲ್ಲಿ ಒಂದು ಬಾವಿ ಇತ್ತು. ಅದಕ್ಕೆ ಮೊದಲ ದಿನ ಕುಂಬಳ ಕಾಯಿ ಹಾಕುವುದು ಸಂಪ್ರದಾಯ, ಸಂಪ್ಯಾಡಿ ಬಯಲಿನ ಭಕ್ತರೆಲ್ಲಾ ಅಲ್ಲಿ ಕುಂಬಳಕಾಯಿ, ಹಾಕಿ ಬರುತ್ತಿದ್ದರು. ಅದನ್ನು ಸಂಜೆ ಸಂಗ್ರಹಿಸಿ ಮಾರನೇ ದಿನದ ಅನ್ನ ಸಂತರ್ಪಣೆಗ ಉಪಯೋಗಿಸಲಾಗುತ್ತಿತ್ತು.
ಆಟಿ ಅಮಾವಾಸ್ಯೆಯ ದಿನವಂತೂ ಊರಿನ ಭಕ್ರರು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಪರವೂರ ಸಾಕಷ್ಟು, ಭಕ್ತರೂ ಬಂದು ಹೋಗುತ್ತಿದ್ದರು. ಸಂತಾನ ಪ್ರಾರ್ಥನೆ, ಸಂತಾನ ಪಡೆದವರ ಸೇವೆ ಸಮರ್ಪಣೆ, ಹಸು ಗರ್ಭಿಣಿ ಆಗುವಾಗಲೇ ಹರಕೆ ಹೊತ್ತಂತೆ ಹಾಲು, ತುಪ್ಪ ಸಮರ್ಪಣೆ, ಬೆಳ್ಳಿ, ಚಿನ್ನದ ನಾಗ, ತೊಟ್ಟಿಲ ಮಗು ಅರ್ಪಣೆ ಇದನ್ನೆಲ್ಲ ಭಕ್ತರು ಬಹಳ ಭಕ್ತಿಯಿಂದ ಕೈಗೊಳ್ಳುತ್ತಿದ್ದರು. ವಿಪರೀತ ಮಳೆ ನಿಲ್ಲಲು ಜಾಗವಿಲ್ಲ. ಹೀಗಿದ್ದರೂ ಜನರಿಗೆ ಆ ಕ್ಷೇತ್ರದ ಮೇಲಿದ್ದ ಭಕ್ತಿ ಅನನ್ಯ, ಆ ಕ್ಷೇತ್ರದ ಪರಿಸರವೇ ಸಹಜವಾಗಿ ಭಕ್ತಿ ಉಕ್ಕಿಸುವಂತಿತ್ತು. ಅಂತಹ ದಿನಗಳು ಅದೆಷ್ಟೋ ವರ್ಷಗಳಿಂದ ಜನರ ಮೇಲೆ ಗಾಢ ಪ್ರಭಾವ ಬೀರಿದ್ದವು.
ಈಗಿನ ಆಡಳಿತದಾರ ಶ್ರೀ ಗೋಕುಲ ಪಿ.ಎಸ್. ಅವರ ಅಜ್ಜ ನಾರಾಯಣ ಭಟ್ ಅವರು ದೇವಳವನ್ನು ಅವಶ್ಯವಿದ್ದಲ್ಲಿ ರಿಪೇರಿ ಮಾಡಿಸಿಕೊಂಡು ಹಿರಿಯರ ಕಾಲದಿಂದ ನಡೆದುಕೊಂಡು ಬಂದಂತೆ ಪೂಜೆ ಪುರಸ್ಕಾರಗಳು ತಪ್ಪದೆ ಆಗುವಂತೆ ನೋಡಿಕೊಂಡು ಬಂದಿದ್ದರು. ಗೋಕುಲರ ತಂದ ಹರಿಪ್ರಸಾದ್ ರಾವ್ ಅವರು ಬಹಳ ವರ್ಷಗಳಿಂದ ಜೀರ್ಣೋದ್ಧಾರದ ಕನಸು ಕಂಡಿದ್ದರು. ಈ ಕುರಿತು ನನ್ನಲ್ಲಿ ಬಹಳ ಮಾತಾಡಿದ್ದಾರೆ. ಆದರೆ, ಜೀರ್ಣೋದ್ದಾರ ಕಾರ್ಯ ಮಾಡುವ ಯೋಗ ಒದಗಿ ಬಂದುದು ಶ್ರೀ ಗೋಕುಲರಿಗೆ, 1996ರಲ್ಲಿ ಶಿಶಿಲ ಶ್ರೀ ಸೀತಾರಾಮ ಕೆದಿಲಾಯರನ್ನು ದೇವಸ್ಥಾನಕ್ಕೆ ಕರೆಸಿ ಅಷ್ಟಮಂಗಲ ಪ್ರಶ್ನೆಯ ಮೂಲಕ ಚಿಂತನೆ ಮಾಡಲಾಯಿತು. ಆ ಪ್ರಕಾರ ಈಗಿರುವ ಕ್ರಮದಂತೆ ಬೆದ್ರಡ್ಕ ಶ್ರೀಧರ ಕಾರಂತರು ನಕ್ಷೆ ಸಿದ್ಧಪಡಿಸಿದರು.
ಶ್ರೀ ಅನಂತಪದ್ಮನಾಭ ದೇವರು ಪರ್ಲತ್ತಾಯ ವಂಶಸ್ಥರ ಆರಾಧ್ಯ ದೇವರು, ಕುಲದೇವರು ಎಲ್ಲೆಲ್ಲೂ ನೆಲೆಯೂರಿದ್ದ ಕೆಲವು ಪರ್ಲಪ್ರಾಯ ವಂಶಸ್ಥರಿಗೆ ಈ ವಿಚಾರ ತಿಳಿದಿರಲೇ ಇಲ್ಲ. ಕಿನ್ನಿಗೋಳಿ ಬಾಲಕೃಷ್ಣ ಆಚಾರ್ಯರು ಆ ವೇಳೆಗೆ ದೇವ ದೂತನಂತೆ ಬಂದು ಪರ್ಲತ್ತಾಯ ಕುಟುಂಬಸ್ಥರ ಸಂತಾನ ನಕ್ಷೆ ಸಿದ್ಧ ಪಡಿಸಿ ಊರೂರು ಅಲೆದು ನೀವು ಫರ್ಲತ್ತಾಯರು, ನಿಮ್ಮ ಕುಟುಂಬದ ದೇವರು ಇವರು, ಎಂದು ಕದ ತಟ್ಟಿ ತಿಳಿಸಿದರು. ಈ ಪ್ರೇರಣೆಯಿಂದ ಕುಟುಂಬಸ್ಥರಲ್ಲ ಒಂದಾಗಿ ಶ್ರೀ ದೇವರ ಜೀರ್ಣೋದ್ಧಾರ ಮಾಡೋಣವೆಂಬ ಗುರಿ ಹೊಂದಿದ ಪರ್ಲತ್ರಾಯ ಟ್ರಸ್ಟ್, ಹಿರಿಯರಾದ ಶ್ರೀ ಎನ್. ಸುಬ್ಬರಾಯರ ನೇತೃತ್ವದಲ್ಲಿ ಸ್ಥಾಪಿತವಾಯಿತು. ಎಷ್ಟೋ ವರ್ಷಗಳಿಂದ ಎಲ್ಲರೂ ಕಂಡ ಕನಸು ನನಸಾಗಲು ಗೋಕುಲರ ಚಿಂತನೆ ಸಾಕಾರಗೊಳ್ಳಲು ಇದು ಪೂರಕವಾಯಿತು.
ಆರಂಭದಲ್ಲಿ ಕೆಲವು ತೊಡಕುಗಳಿರುವುದು ಸರ್ವೆಸಾಮಾನ್ಯ ಇಲ್ಲಿಯೂ ಅಂತಹ ಸಣ್ಣಪುಟ್ಟ ತೊಡಕುಗಳಿದ್ದರೂ ಮಂಗಳೂರಿನ ಶ್ರೀ ನಾರಾಯಣ ಆಚಾರ್, ಉಡುಪಿಯ ಶ್ರೀ ಶ್ರೀಪತಿ ಆಚಾರ್ ಬೆಂಗಳೂರಿನ ದಿ| ವಾಮನ ಆಚಾರ್ ಮುಂತಾದವರು “ಏನಿದ್ದರೂ ಜೀರ್ಣೋದ್ಧಾರವೇ ನಮ್ಮ ಗುರಿ’ ಎಂಬ ಮೂಲ ಮಂತ್ರದೊಂದಿಗೆ ಧೈರ್ಯದಿಂದ ಮುನ್ನಡೆಯಲು ಪ್ರೇರೇಪಿಸಿದರು. ಜೀರ್ಣೋದ್ಧಾರ ಆರಂಭಿಸಲು ಪ್ರಧಾನ ಘೋಷಣೆಯ ಭಾರವನ್ನು ಹೊರಲು ಟ್ರಸ್ಟ್ ಸಿದ್ಧವಾಯಿತು. ಸ್ಥಳೀಯವಾಗಿ ಜೀರ್ಣೋದ್ಧಾರ ಸಮಿತಿ ರಚನೆಗೊಂಡಿತು.
ಅಷ್ಟಮಂಗಲದಲ್ಲಿ ಕಂಡ ದೋಷಗಳಿಗೆ ಪರಿಹಾರ ಕಾರ್ಯಗಳು 1998ರಲ್ಲಿ ನಡೆದವು. 26-10-2001ರಂದು ಅನುಜ್ಞಾಕಲಶವು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಒಂದು ವಾರದಲ್ಲಿ ದೇವಳವನ್ನು ಬಿಚ್ಚಿಸುವ ಬಗ್ಗೆ ದಿನ ನಿಗದಿ ಪಡಿಸಲಾಯಿತು. ಈ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಊರ ಪರಊರ ಜನರ ನಂಬಿಕೆಯಂತೆ ಇಲ್ಲಿ ಹುತ್ತವೇ ಜನರ ಭಕ್ತಿಯ ಕೇಂದ್ರ, ನಾಗದೇವರೇ ಇಲ್ಲಿನ ಪ್ರತಿನಿಧಿ, ದೇವಳ ಬಿಚ್ಚಿಸಬೇಕಾದ ವೇಳೆ ಹತ್ತಿರ ಬಂದಂತೆ ಎಲ್ಲರ ಮನದಲ್ಲೂ ಕಾಡಿದ ಚಿಂತೆಗಳು ಅನೇಕ. ಗೋಡೆ ಕಳಚುವಾಗ ಹುತ್ತ ಒಡೆದುಹೋದರೆ ಏನು ಗತಿ? ಗೋಡೆ, ನೆಲ ಪುರಾತನವಾದುದು ಅದರ ಸಂದು ಗೊಂದುಗಳಲ್ಲಿ ಸರ್ಪ ಇರಬಹುದಲ್ಲವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಪುಂಕಾನು ಪುಂಕವಾಗಿ ಭಕ್ತರಿಂದ ಬರಲಾರಂಭಿಸಿದವು. ಬಿಚ್ಚಿಸುವ ದಿನ ನವೆಂಬರ್ 8 ರ ಮೊದಲ ರಾತ್ರಿ ಹಲವು ದೂರವಾಣಿ ಕರೆಗಳು-ಹೇಗೆ ಬಿಚ್ಚಿಸುತ್ತೀರಿ ಹುತ್ತಕ್ಕೆ ಅಪಾಯ ಆಗಬಾರದು, ಸರಿಯಾಗಿ ಕೇಳಿ ಕೊಂಡಿದ್ದಿರಾ ಬಿಚ್ಚಿಸಬಹುದೆಂದು, ಹೇಳಿದವರು ಯಾರು? ಹೀಗೆ ಅನೇಕ ಪ್ರಶ್ನೆಗಳು ಬಂದಾಗ ರಾತ್ರಿಯಲ್ಲಿ ಕಣ್ಣಿಗೆ ಕಂಡದ್ದು ದೇವಸ್ಥಾನ: ಅವರು ವ್ಯಕ್ತ ಪಡಿಸಿದ ಸನ್ನಿವೇಶ, ಈ ಎಲ್ಲದರ ಅರಿವು ಇದ್ದ ನಾವು ಸಾಕಷ್ಟು ಮುಂದಾಲೋಚನೆ ಮಾಡಿಯೇ ಇದ್ದೆವು. ದೇವಸ್ಥಾನದ ಜೀರ್ಣೋದ್ದಾರಕ್ಕೆ ಶಾಸ್ತ್ರದಲ್ಲಿ ಯಾರು ಯಾರು ಪ್ರಮುಖರೆಂದು ಪ್ರಾಜ್ಞರು ತಿಳಿಸಿದ್ದಾರೋ ಅವರೆಲ್ಲರನ್ನೂ ಗುರು ಹಿರಿಯರನ್ನೂ ಆ ದಿನ ಬರುವಂತೆ ಮಾಡಿದ್ದೆವು. ಎಲ್ಲರೂ ಬಂದರು ಸುಮಾರು 250 ಜನ ಕಾರ್ಯಕರ್ತರೂ ಸೇರಿದ್ದರು. ಒಂದೇ ದಿನದಲ್ಲಿ ನಿರಾತಂಕವಾಗಿ ಹುತ್ತವಿದ್ದ ಜಾಗದ ಹೊರತು ನೆಲ ಮಟ್ಟದವರೆಗೆ ಸಮತಟ್ಟಾಯಿತು. ಭಕ್ತರೆಲ್ಲಾ ನಿಟ್ಟುಸಿರು ಬಿಟ್ಟರು. ಮಾರನೇ ದಿನವೇ ಪಾಯದ ಕೆಲಸ, ಅದೊಂದು ಸಾಹಸ ಕಾರ್ಯ. ಯಾಕೆಂದರೆ ಅಲ್ಲಿದ್ದುದೇ ನೀರು, ಮೂರು ಪಂಪುಗಳು ನೀರೆತ್ತಿದ್ದರೂ ಕ್ಷಣ ಮಾತ್ರವಲ್ಲಿ ನೀರು ತುಂಬುವಂತಹ ಸ್ಥಿತಿ, ನವಂಬರ್ 14 ಸುಬ್ರಹ್ಮಣ್ಯದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಪಾದರಿಂದ ಶಿಲಾನ್ಯಾಸ, ಅಲ್ಲಿಂದ ಆರಂಭಗೊಂಡ ಕೆಲಸ ನಿಲ್ಲಲೇ ಇಲ್ಲ. ಯಾವುದೇ ವಿಘ್ನಗಳು ಕಾಡಲಿಲ್ಲ. ದೇವರ ಅನುಗ್ರಹವೊಂದಲ್ಲದೇ ಹೋದರೆ ಯಾವುದೇ ಕ್ಷಣದಲ್ಲೂ ಏನೂ ಆಗಬಹುದಾದ ಸನ್ನಿವೇಶಗಳು,
ಯೋಜನೆಯಂತೆ ಮೊದಲ ಹಂತದಲ್ಲಿ ಶಿಲಾಮಯ ಗರ್ಭಗುಡಿ, ತಾಮ್ರ ಹೊದಿಸಿದ ಛಾವಣೆ, ಏನಿದ್ದರೂ ಬ್ರಹ್ಮಕಲಶ ಸೇರಿ 25 ಲಕ್ಷ ರೂ ಬೇಕೆ ಬೇಕು. ಹಣವಲ್ಲಿಂದ? ಹೇಗೆ ಸಂಗ್ರಹ? ಬ್ರಹ್ಮಕಲಶ ಫೆಬ್ರವರಿ 27, ಕೇವಲ 105 ದಿನಗಳು ಮಾತ್ರ ಆ ಹೊತ್ತಿಗೆ ಹಣ ಸಂಗ್ರಹಕ್ಕೆ ಬೆನ್ನೆಲುಬಾಗಿ ನಿಂತವರು ಮಂಗಳೂರಿನ ಶ್ರೀ ಎನ್. ವೆಂಕಟ್ರಾಜ್, ದೇವರಿದ್ದಾನೆ ಮುಂದುವರಿಸಿ ಎನ್ನುತ್ತಾ ಹೆಜ್ಜೆಹೆಜ್ಜೆಗೆ ಮಾತಿನಂತೆ ನಡೆದುಕೊಂಡರು ಕಾಯಾ, ವಾಚಾ, ಮನಸಾ, ಸಂಗ್ರಹದ ಪ್ರಮುಖರಾದರು. ತನ್ನ ಸೇವೆಯಿಂದ ಅಪಾರ ಜನರ ಪ್ರೀತಿಗಳಿಸಿದ್ದ ಇವರು ಅವರೆಲ್ಲರನ್ನು ಒಂದುಗೂಡಿಸಿ ರಾಷ್ಟ್ರದಾದ್ಯಂತ ಧನಸಹಾಯ ಒದಗಿ ಬರುವಂತೆ ಶ್ರಮಿಸಿದರು. ಪರ್ಲತ್ರಾಯ ಕುಟುಂಬಸ್ಥರ ಶಕ್ತಿ ಮೀರಿದ ಕಾಣಿಕೆ ಹರಿದುಬಂತು, ಊರ ಜನರು ಶಕ್ತಿ ಮೀರಿ ಕೈ ಜೋಡಿಸಿದರು. ನಿಗದಿತ ದಿನದಂದು ಬ್ರಹ್ಮಕಲಶ ನೆರವೇರಿತು. ಮಾರ್ಚ್ 1. ಬ್ರಹ್ಮಕಲಶ ಅಂದು ಭಾರತ ಬಂದ್ ನಮಗೆಲ್ಲ ಭಯ ಯಾರು ಬರುತ್ತಾರೆ? ಹೇಗೆ ಬರುತ್ತಾರೆ ಎಂಬುದು, ಆದರೆ ನಿರೀಕ್ಷೆಗಿಂತ ಹೆಚ್ಚು ಜನ ಅಂದು ಸೇರಿದರು. ಬರಬೇಕಾದವರು ಬಂದರು. ಇದು ಆ ದೇವನ ಮಹಿಮೆ, ಆತನ ಅನುಗ್ರಹವಿದ್ದಾಗ ಎಲ್ಲವೂ ಸಾಧ್ಯ ಎಂಬುದಕ್ಕೆ ಸಾಕ್ಷಿ, ಇದಕ್ಕಿಂತ ಹೆಚ್ಚಿನ ಅಚ್ಚರಿಯೊಂದನ್ನು ತಿಳಿಸುತ್ತೇನೆ. ಬ್ರಹ್ಮ ಕಲಶದ ಮೂರನೇ ದಿನ ಚಪ್ಪರ ತೆಗೆದು ಸ್ವಚ್ಛತೆಯ ಕಾರ್ಯ ನಿದ್ದೆಗಣ್ಣಿನಲ್ಲಿ ಸುಮಾರು ಒಂದು ನೂರು ಜನ ಭಕ್ತಿಯಿಂದ ಸೇವೆ ಮಾಡುತ್ತಿದ್ದರು. ಹೊರೆ ಕಾಣಿಕೆಯಲ್ಲಿ ಸಂಗ್ರಹಗೊಂಡ ವಸ್ತುಗಳ ವಿಲೇವಾರಿಗೆ ಹೊರಟಾಗ ಅಲ್ಲಿ ಸರ್ಪ ತನ್ನ ಹೆಡೆ ಬಿಚ್ಚಿತು. ಇದು ನನ್ನ ಕ್ಷೇತ್ರ, ಇಲ್ಲಿ ನಾನಿದ್ದೇನೆ ಎಂಬುದನ್ನು ಖಾತ್ರಿ ಪಡಿಸಿತು, 105 ದಿನಗಳ ಕೆಲಸದ ವೇಳೆ, ಆ ಕಾಡುಪ್ರದೇಶದಲ್ಲಿ ಕಲ್ಲು ತೆಗೆಯುವ, ಅಗೆಯುವ ಹೊತ್ತಿಗೆ ನಾಗರಾಜನ ದರುಶನವಾಗುತ್ತಿದ್ದರೆ ಏನಾಗುತ್ತಿತ್ತೆಂದು ಗೊತ್ತಿಲ್ಲ, ಇದೇ ಅನಂತ ಪದ್ಮನಾಭ ಕ್ಷೇತ್ರದ ಮಹಿಮೆ ಕಾರಣಿಕ. ಇದೇ ಶಕ್ತಿಯನ್ನು ಸಾರುವ ಘಟನೆಗಳು,
ಒಂದು ವರುಷದ ವಿರಾಮದ ಬಳಿಕ ಸುತ್ತು ಗೋಪುರ ರಚನೆಗೆ ಮತ್ತೆ ಚಾಲನೆ ಸಿಕ್ಕಿತು. ಕೆಲಸ ಆರಂಭ ಗೊಂಡಿತು. ಮೊದಲಿನಷ್ಟು ವೇಗವಿರಲಿಲ್ಲ. ಕಾರಣವೂ ಇದೆ, ಯಾಕೆಂದರೆ, ಕುಟುಂಬಸ್ಥರು ಸಾಕಷ್ಟು ಕೊಟ್ಟಿದ್ದಾರೆ, ಹೆಚ್ಚಿನ ವೆಚ್ಚ ಹೊರಗಿಂದಲೇ ಬರಬೇಕು, ಬಂತು, 2006 ಮ. 18 ಮತ್ತು 19 ರಂದು ಗೋಪುರದಲ್ಲಿ ಶ್ರೀ ದುರ್ಗಾ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದೊಂದಿಗೆ ಶ್ರೀ ದೇವರ ಸೇವೆಗೆ ಸಮರ್ಪಿತವಾಯಿತು.
ದೇವಳದ ಅನುವಂಶಕ ಮುಕ್ತೇಸರರು ಶ್ರೀ ಗೋಕುಲರು ಸಾಪ್ಟವೇರ್ ಇಂಜಿನಿಯರ್, ಅವರ ಧರ್ಮ ಪತ್ನಿಯ ಅದೇ ಉದ್ಯೋಗಿ. ಹೆಸರಾಂತ ಕಂಪೆನಿಯಲ್ಲಿ ದುಡಿಮೆ ಹೊರ ರಾಷ್ಟ್ರದಲ್ಲಿಯ ಮನೆ ಮಾಡುವ ಎಲ್ಲಾ ಅವಕಾಶಗಳ ಇತ್ತು, ಆದರೆ ತಾಯ್ನಾಡು, ಕುಟುಂಬದ ಆರಾಧ್ಯ ದೇವರು, ಅದಕ್ಕಿಂತಲೂ ಮಿಗಿಲಾಗಿ ತಲೆ ತಲಾಂತರದಿಂದ ಬಂದ ಜವಾಬ್ದಾರಿಯ ಪೂರೈಕೆಯನ್ನು ಮನದಲ್ಲಿಟ್ಟುಕೊಂಡು, ಹಿರಿಯರಿಂದ ಬಂದ ಭೂಮಿಯನ್ನು ಉಳಿಸಿಕೊಂಡು ದೇವ ಸೇವೆಗೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟರು. ಅವರಿಗೆ ಮುಂದೆ ನಿಂತು ಸೇವೆಗೆ ಮಾಡುವ ಭಾಗ್ಯ ದೇವರು ಅನುಗ್ರಹಿಸಿದ್ದರು. ಇದು ಪೂರ್ವಜನ್ಮದ ಫಲ.
ನಿರ್ಮಾಣ ಕಾರ್ಯಗಳಿಗೆ ಪೂರ್ಣ ಮಾರ್ಗದರ್ಶನ ಕಲ್ಲೇರಿ ರಮೇಶ ಉಪಾಧ್ಯಾಯರದ್ದು. ಅವರ ಮಗ ಶ್ರೀ ಕೃಷ್ಣಮೂರ್ತಿ ತುಂಬಿದ ಕೊಡದಂತೆ ಯಾವುದೇ ಸಹಾಯಕ್ಕೂ ಸದಾ ಸಿದ್ದರು. ಶ್ರೀ ವಿದ್ಯಾರಣ್ಯ, ಶ್ರೀ ಮನೋಹರ, ಶ್ರೀ ವಿಕ್ರಮ ಇವರೆಲ್ಲ ತಂದೆಯ ಮನದ ಇಂಗಿತಕ್ಕೆ ಪ್ರೋತ್ಸಾಹ ನೀಡಿ ಈ ಕೆಲಸಗಳಲ್ಲಿ ತನು, ಮನ, ಧನ ರೂಪದಲ್ಲಿ ಸಹಕರಿಸಿದರು.
ಮಂಗಳೂರಿನ ಶ್ರೀ ರವಿರಾಜ ಎನ್, ಇವರೊಬ್ಬ ಉತ್ಸಾಹಿ ಕನಸುಗಾರ, ಈ ಕೆಲಸ ಕಾರ್ಯಗಳಲ್ಲಿ ಸದಾ ದುಡಿದವರು. ಸ್ಥಳೀಯರಾದ ಶ್ರೀ ಅನಂತ ಕುಮಾರ್, ಶ್ರೀ ರಾಜಾರಾಮ ಭಟ್, ಶ್ರೀ ಸಂಜೀವ ಶೆಟ್ಟಿ, ಶ್ರೀ ಪ್ರಕಾಶ ಆಚಾರ್ ಮುಂತಾದವರೆಲ್ಲ ದೇವಸ್ಥಾನದಿಂದ ಕೂಗಳತೆಯ ದೂರದಲ್ಲಿರುವವರು, ಇವರು ರಾತ್ರಿ ಹಗಲು ದುಡಿದ ಶ್ರಮ ಆ ದೇವರಿಗೆ ಸಮರ್ಪಿತವಾಗಿದೆ. ದೇವಳದ ಅರ್ಚಕರು ಶ್ರೀ ವೆಂಕಟೇಶ ಮುಚ್ಚಿಂತಾಯರು, ಅವರ ಹಿರಿಯರ ಕಾಲದಿಂದಲೂ ಆ ದೇವರ ಪೂಜೆಯನ್ನು ಅತ್ಯಂತ ನಿಷ್ಠೆಯಿಂದ ನಡೆಸಿಕೊಂಡು ಬಂದ ಪುಣ್ಯ ಕೀರ್ತಿ ಅವರದು. ರೂಢಿ ಸಂಪ್ರದಾಯ, ಮಡಿ ಇತ್ಯಾದಿಗಳಿಗೆ ಯಾವುದೇ ರಾಜಿ ಇಲ್ಲದಂತೆ ವರ್ತಿಸುವ ಅವರ ಕ್ರಮ ನಮಗೆ ಎಲ್ಲೂ ನೋಡಲು ಸಿಗುವುದು ಕಷ್ಟ, ಅವರು, ಅವರ ಕುಟುಂಬ ಆ ದೇವರ ಸೇವೆಗೆ ಮುಡಿಪಾಗಿಟ್ಟ, ಕುಟುಂಬ, ಅವರಿಗೆ ಇನ್ನಷ್ಟು ದುಡಿಯಲು ಶಕ್ತಿ ಪ್ರಾಪ್ತವಾಗಲಿ’ ಎಂದು ನಮ್ಮ ಪ್ರಾರ್ಥನೆ, ದೇವರ ಸೇವೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಜನರಿಗೂ, ಧನ ಸಹಾಯ ಮಾಡಿದ ಎಲ್ಲಾ ಮಹನೀಯರಿಗೂ, ಶ್ರೀ ದೇವರು ಶುಭ ಕರುಣಿಸಲಿ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವಿರೇಂದ್ರ ಹೆಗ್ಗಡೆಯವರು ವಿಶೇಷ ಧನಸಹಾಯ ನೀಡಿ ಪ್ರೋತ್ಸಾಹಿಸಿದ್ದಾರೆ. ಮುಖ್ಯವಾಗಿ ನಮ್ಮೆಲ್ಲ ಯೋಜನೆಗಳು ಸಾಕಾರಗೊಳ್ಳಲು ಶ್ರಮಿಸಿದ ಶಿಲ್ಪಿ ಕಾರ್ಕಳದ ರಾಜೇಂದ್ರನ್, ರಾಷ್ಟ್ರ ಶಿಲ್ಪಿ ಕೇರಳದ ಶಂಕರಾಚಾರಿ, ಇತರ ನಿರ್ಮಾಣ ಕಾರ್ಯದಲ್ಲಿ ಶ್ರೀ ರಾಘಮೇಸ್ತ್ರಿ ಆಲಂಕಾರು, ಶ್ರೀ ತಿಮ್ಮಪ್ಪ ಪಾಣೆ ಮಂಗಳೂರು ಇವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಶ್ರದ್ಧೆ, ನುಡಿದಂತೆ ಕೆಲಸ ಮುಗಿಸುವ ಸಾಮರ್ಥ್ಯ, ಈ ಎಲ್ಲಾ ಯಶಸ್ಸಿಗೆ ಕಾರಣವಾಯಿತು.
ಶ್ರೀ ದೇವರ ಸೇವೆ ಮಾಡಿದವರು ಅನೇಕರಿದ್ದಾರೆ. ಇಲ್ಲಿ ಕೆಲವೇ ಹೆಸರುಗಳು ದಾಖಲಾಗಿವೆ. ದುಡಿದವರೆಲ್ಲರೂ ಈ ಜೀರ್ಣೋದ್ದಾರದ ಸಂತಸ ಅನುಭವಿಸಿದ್ದಾರೆ. ಸೇವೆಯ ಧನ್ಯತಾ ಭಾವ ಹೊಂದಿದ್ದಾರೆ. ಇಂತಹ ಅವಕಾಶ ದುರ್ಲಭ ಆ ಕ್ಷಣಗಳು ಈ ಜನುಮದಲ್ಲಿ ಮತ್ತೊಮ್ಮೆ ಬಾರದು. ಇಂತಹ ಸುಯೋಗ ಒದಗಿ ಬಂದ ನಾವೆಲ್ಲ ಪುಣ್ಯ ಶಾಲಿಗಳು, ಭಾಗ್ಯ ಶಾಲಿಗಳು.
ಜೀರ್ಣೋದ್ದಾರ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ದುಡಿಯುವ ಅವಕಾಶವನ್ನು ದೇವರು ನನ್ನ ಪಾಲಿಗೆ ಕರುಣಿಸಿದರು. ಇದಕ್ಕಿಂತ ದೊಡ್ಡ ಭಾಗ್ಯ ನನಗೆ ಬೇರಿಲ್ಲ ಪ್ರತಿ ಕಲ್ಲುಗಳು ಮೇಲೇರುವುದನ್ನು ಪ್ರತಿ ಹಂತದ ಕೆಲಸಗಳನ್ನು ಕಂಡ ನಾನು ಧನ್ಯ.
ಲೇಖಕರು
ನಾರಾಯಣ ಭಟ್ ಟಿ.
(ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯಗುರುಗಳು – ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜ ಹಾಗು ಈಗಿನ ಕಾರ್ಯದರ್ಶಿ- ಪರ್ಲತ್ತಾಯ ಪ್ರತಿಷ್ಠಾನ.
Temple Address:
Shree Ananthapadmanabha Temple,
Shree Kshetra Kondappadi ,
Post : Ramakunja 574241, Kadaba Taluk ,
Dakshina Kannada District,
Karnataka, India.